ಚಂದಮಾಮಾ

ಮದ್ರಾಸಿನಿಂದ ಹೊರಡುವ ಮಕ್ಕಳ ಮಾಸಪತ್ರಿಕೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಗುಜರಾತಿ, ಇಂಗ್ಲಿಷ್, ಮಲಯಾಳಂ, ಬಂಗಾಲಿ ಮತ್ತು ಒರಿಯ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್, ಬಂಗಾಲಿಗಳಲ್ಲಿ ಚಂದಮಾಮ, ತಮಿಳಿನಲ್ಲಿ ಅಂಬುಲಿಮಾಮ, ಮಲಯಾಳಂನಲ್ಲಿ ಅಂಬಿಅಮ್ಮಾವನ್, ಮರಾಠಿಯಲ್ಲಿ ಚಂದೋಬ, ಒರಿಯದಲ್ಲಿ ಜಹ್ನಮಾಮು ಎಂದು ಪತ್ರಿಕೆಯ ಹೆಸರು. ಪತ್ರಿಕೆ ತಮಿಳು ತೆಲುಗುಗಳಲ್ಲಿ 1947 ರಲ್ಲೂ ಕನ್ನಡದಲ್ಲಿ 1948ರಲ್ಲೂ ಹಿಂದಿಯಲ್ಲಿ 1949ರಲ್ಲೂ ಮರಾಠಿಯಲ್ಲಿ 1952 ರಲ್ಲೂ ಗುಜರಾತಿಯಲ್ಲಿ 1954ರಲ್ಲೂ ಇಂಗ್ಲಿಷ್, ಮಲಯಾಳಂಗಳಲ್ಲಿ 1970ರಲ್ಲೂ ಬಂಗಾಲಿ, ಒರಿಯಗಳಲ್ಲಿ 1972ರಲ್ಲೂ ಆರಂಭವಾಯಿತು, ಇದರ ಸ್ಥಾಪಕರು ಬಿ ನಾಗರೆಡ್ಡಿ ಮತ್ತು ಚಕ್ರಪಾಣಿ. ಈಗಿನ ಸಂಪಾದಕರು ಮತ್ತು ಪ್ರಕಾಶಕರು ಬಿ ವಿಶ್ವನಾಥರೆಡ್ಡಿ. 

ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದೂ ದೇಶದ ಭವ್ಯಪರಂಪರೆಯನ್ನೂ ಪ್ರಾಚೀನ ಸಂಸ್ಕøತಿ ಮತ್ತು ನೈತಿಕ ಮೌಲ್ಯಗಳನ್ನೂ ಕಥೆಗಳ ಮತ್ತು ಇತಿಹಾಸದ ವೃತ್ತಾಂತದ ನಿರೂಪಣೆಯ ಮೂಲಕ ಅವರಿಗೆ ಪರಿಚಯ ಮಾಡಿಕೊಡುವುದೂ ಚಂದಮಾಮದ ಉದ್ದೇಶಗಳು. ಬಣ್ಣ ಬಣ್ಣದ ಚಿತ್ರಗಳು, ದೇಶವಿದೇಶಗಳ ಕಥೆಗಳು, ಓದುಗರ ಇಂದ್ರಿಯ ಗ್ರಹಣ ಶಕ್ತಿಯನ್ನೂ ಕಲ್ಪನಾಶಕ್ತಿಯನ್ನೂ ಕುದುರಿಸುವ ದೃಷ್ಟಿಯಿಂದ ಏರ್ಪಡಿಸುವ ಛಾಯಾಚಿತ್ರ ಶೀರ್ಷಿಕೆ ಸ್ಪರ್ಧೆ-ಇವು ಚಂದಮಾಮದ ಕೆಲವು ವೈಶಿಷ್ಟ್ಯಗಳು. ಮಕ್ಕಳ ವಿವಿಧ ರುಚಿಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಆಕರ್ಷಣೀಯವಾಗುವಂತೆ ಪ್ರಕಟವಾಗುತ್ತಿದೆ.
(ಟಿ.ಎಸ್.ಎಸ್.ಆರ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ